Sunday, October 26, 2014

Gundu Thop's of South interior Karnataka /Tiptur

ಗುಂಡು ತೋಪು 


ಗ್ರಾಮೀಣ ಸಮುದಾಯಗಳು ಅಥವ ಸಮುದಾಯ ಪ್ರಜ್ಞಾಯುಳ್ಳ ವ್ಯಕ್ತಿಗಳು ತಮ್ಮ ಗ್ರಾಮದ ಹೊರ ಭಾಗಗಳಲ್ಲಿ ಪ್ರಜ್ಞಾಪೂರ್ವಕವಾಗಿ ಗಿಡಗಳನ್ನು ನೆಟ್ಟು ಅದರ ಪೋಷಣೆ ಹಾಗು ಸಂರಕ್ಷಣೆ ಕಾರ್ಯಮಾಡಿ ನಿರ್ಮಿಸಿದ ವೃಕ್ಷಗಳ ಸಮೂಹ ಅಥವ ತೋಪುಗಳನ್ನು ಇಂದು ಗುಂಡುತೋಪುಗಳೆಂದು ಕರೆಯುತ್ತೆವೆ.  ಬಯಲು ಸೀಮೆಯ ಹಿಂದಿನ ಮೈಸೂರ ಪ್ರಾಂತ್ಯಗಳಲ್ಲಿ ಕಂಡುಬರುವ ಈ ವೃಕ್ಷ ಸಮುಹಗಳ ನಿರ್ಮಾಣದ ಮೂಲ ಪರಿಕಲ್ಪನೆಯು ಈ ನೆಲದ ಮೂಲವಾಸಿ ಮತ್ತು ದ್ರಾವಿಡ ಸಂಸ್ಕೃತಿಯದಾಗಿರುತ್ತದೆ. ತದನಂತರದಲ್ಲಿ ಈ ಸಂಸ್ಕೃತಿಯು ವೈದಿಕ ಸಂಪ್ರದಾಯದಲ್ಲಿ ಬೆರತು ಕ್ಷೀತಿರುಹನೋಂಪಿ (ಗಿಡ ನೆಡುವ ವ್ರತ) ಎಂಬ ವೈದಿಕ ಸಂಪ್ರದಾಯವಾಯಿತು. 

ಗಿಡ ನೆಡುವ ವ್ರತದ ಉದ್ದೇಶ ಸಾಮಾನ್ಯವಾಗಿ ಪಾಪಗಳನ್ನು ತೊಳೆದು ಪುಣ್ಯಗೊಳಿಸುವುದಾಗಿರತ್ತದೆ. ಬಿಜಾಪುರದ ಹಿರೆಬೇವಿನೂರುನಲ್ಲಿ ದೊರೆತ ಕ್ರಿ. ಶ 1190 ರ ಶಾಸನವು, 30 ಗ್ರಾಮದ ಯಜಮಾನನಾದ ಬೂಪಯ್ಯನ ಹೆಂಡತಿ ಸಿರಿಯದೇವಿಯು ವೈದಿಕ ಧರ್ಮದಲ್ಲಿ ಸೂಚಿಸಿದ ಎಲ್ಲಾ ವ್ರತಗಳನ್ನು ಮಾಡಿ ಮುಗಿಸಿದರೂ ಇನ್ನೊಂದು ಕ್ಷಿತಿರುಹನೋಪಿ ವ್ರತವುಂಟೆಂದು ಕೇಳಿ ಸಂತೋಷದಿಂದ ಗಿಡ ನೆಡುವ ವ್ರತ ಆಚರಿಸಿ ಅದರಲ್ಲಿ ನೆರಳೆ, ವಿಳ್ಯದೆಲೆ, ಹಲಸು, ತೆಂಗು ಮತ್ತು ಇತರೆ ವನಸ್ಪತಿ (ಕಾಡು ಗಿಡ)ಗಳನ್ನು ನೆಟ್ಟು ಪೋಷಿಸಿದಳು ಎಂದು ತಿಳಿಸುತ್ತದೆ. ಹಾಗೆ, ಗಿಡಗಳನ್ನು ಪೋಷಿಸಲು ನೀರಿಗಾಗಿ ಸಣ್ಣ ಕೊಳ ಮತ್ತು ಆತ್ಮಸ್ಥರ್ಯ ಹಾಗು ವಿಶ್ರಾಂತಿಗಾಗಿ ಸ್ಥಳಿಯ ದೇವರ ಗುಡಿ ಕಟ್ಟಿಕೊಳ್ಳುತ್ತಿದ್ದರು.



ಈ ಗುಂಡು ತೋಪುಗಳೂ ಸಮಾನ್ಯವಾಗಿ ಒಂದೇ ಬಗೆಯ ವೃಕ್ಷಗಳ ಸಮೂಹವಾಗಿದ್ದು ಬಹುತೇಕ ಸಮೂಹಗಳು ಹಿಪ್ಪೆ ಮರಗಳಿಂದ (ಮಧುಕ ಲಾಂಗಿಫೋಲಿಯಾ) ಕೂಡಿರುತ್ತಿದ್ದವು. ರಾತ್ರಿ ಸಮಯದಲ್ಲಿ ದೀಪ-ದೊಂದಿಯನ್ನು ಉರಿಸಲು, ಚಕ್ಕಡಿಗಳ ಕೀಲ ಎಣ್ಣೆಯಾಗಿ ಬಳಸಲು ಹಿಪ್ಪೆ ಎಣ್ಣೆಯನ್ನು / ಉತ್ಪನ್ನಗಳನ್ನು ಸಮುದಾಯದ ಅಗತ್ಯಗಳಿಗಾಗಿ ಆ ಗ್ರಾಮದ ಜನರು ಬಳಸಿಕೊಳ್ಳುತ್ತಿದ್ದರು. ಹಾಗೆ ಇವರುಗಳು ಬಿಡುವಿನ ವೇಳೆಯನ್ನು ತಮ್ಮ ಯುದ್ದ ಕೌಶಲ್ಯಗಳನ್ನು ಮತ್ತು ದೇಹದಾಢ್ಯತೆಯನ್ನು ಹೆಚ್ಚಿಸಿ ಕೊಳ್ಳಲು ಈ ವೃಕ್ಷಸಮೂಹಗಳಲ್ಲಿ ಗಾರುಡಿ ಮನೆಯನ್ನಾಗಿ ಬಳಸುತ್ತಿದ್ದುರ ಬಗೆ ಅರಸೀಕೆರೆಯ ಹುಂಡಿಗನಾಳಿನಲ್ಲಿ ಮಾಹಿತಿ ದೊರೆಯುತ್ತದೆ. ಮುಂದೆ ಅಲ್ಲಿನ ಗುಡಿ ಮಂದಿರಗಳು ದೇವಸ್ಥಾನಗಳಾಗಿ ಮತ್ತು ಕೊಳಗಳು ಕಲ್ಯಾಣಿಗಳಾಗಿ ಪರಿವರ್ತನೆಗೊಂಡವು ಎಂಬುದನ್ನು ಕಾವಲು-ಗುಂಡು ತೋಪಗಳ ಬಳಿಯಿರುವ ದೇವಸ್ಥಾನಗಳಿಂದ ತಿಳಿದು ಬರುತ್ತದೆ. (ಉದಾ:ತಿಪಟೂರು ಬಳಿಯಿರುವ ಬಿದಿರಮ್ಮನ ಗುಡಿ ತೋಪು, ಕಾವಲು ಬಂದಮ್ಮನ ಗುಡಿ ಮತ್ತು  ಬಿದರಮ್ಮನ ಗುಡಿ ಕಾವಲು).

ಕಾಲ ಕ್ರಮೇಣ ಈ ಗುಂಡು ತೋಪುಗಳು ಕಾಲ ಕಾಲಕ್ಕೆ ಪ್ರಯಾಣಿಕರು ಮತ್ತು ಸೈನಿಕರ ತಂಗುದಾಣವಾಗಿ, ವ್ಯಾಪಾರಿಗಳ ವ್ಯಾಪರ ಸ್ಥಳವಾಗಿ ಹಾಗು ಅಲೆಮಾರಿ ಪಂಗಡದ (ಬಂಜಾರರ ಹಾಗು ಜೋಗಿಗಳು) ಜನರ ನೀರ-ನೆರಳಿನ ಸುರಕ್ಷಿತ ಆಶ್ರಯ ತಾಣವಾಗಿ ರೂಪಾಂತರ ಗೊಂಡವು. ನಂತರದಲ್ಲಿ ಗುಂಡುತೋಪಿನಲ್ಲಿ ಹಿಪ್ಪೆಮರದಿಂದ ಹುಣುಸೆಮರ, ಮಾವಿನಮರ ನಂತರ ಸಂಪಿಗೆ, ಆಲ, ಅರಳಿ ಹಾಗು ಬೇವು ಮುಂತಾದ ನೂರು ವರ್ಷಕ್ಕು ಮಿಕ್ಕಿ ಬಾಳುವ ಮರಗಳು ಜನ-ಜಾನುವರುಗಳ ಅಗತ್ಯಕ್ಕೆ ಹಾಗು ಸಂದರ್ಭ ಅನುಗುಣವಾಗಿ ಈ ತೋಪಗಳಲ್ಲಿ ಪ್ರಾಮುಖ್ಯತೆ ಪಡೆದುಕೊಂಡಿವೆ. 

By ; Manohar Patel
Photo Courtesy : Mahesh Chandra Chikkamaglooru.